ಚಾಮರಾಜನಗರ : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆ ಕೂಗಿದ ನಾಸಿರ್ ಹುಸೇನ್ ಬೆಂಬಲಿಗರ ಕ್ರಮವನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇಗುಲದ ಎದುರು ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಾಸೀರ್ ಹುಸೇನ್ ಹಾಗೂ ಕಾಂಗ್ರೆಸ್ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತಕ್ಕೆ ತೆರಳಿ ಅಲ್ಲಿ ಕೆಲ ಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ದೇಶ ವಿರೋಧಿಗಳಾಗಿದ್ದಾರೆ. ಇಂತಹ ಘೋಷಣೆ ಕೂಗಿದ ದೇಶ ದ್ರೋಹಿಗಳನ್ನು ಗಡಿಪಾರು ಮಾಡಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂತಹ ದೇಶ ದ್ರೋಹಿಗಳನ್ನು ಓಲೈಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಇದೇ ಸಂದರ್ಭದಲ್ಲಿ ಸಿಎಂ ಹಾಗೂ ಕಾಂಗ್ರೆಸ್ ಮುಖಂಡರ ಬಾವಚಿತ್ರವಿರುವ ಫ್ಲೆಕ್ಸ್ ಗಳನ್ನು ಪ್ರತಿಭಟನಾಕಾರರು ಸುಡಲು ಮುಂದಾದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಪ್ರತಿಭಟನೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ಅಹಿತಕರ ಘಟನೆ ನಡೆಯಬಾರದು ಎನ್ನುವ ಮುನ್ನೆಚ್ಚರಿಕೆ ಕ್ರಮವಹಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಇಷ್ಟಕ್ಕೆ ಸುಮ್ಮನಿರದ ಪ್ರತಿಭಟನಾಕಾರರು ಸತ್ತಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದರು. ಪ್ರತಿಭಟನಾಕಾರರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದರು.