ಬೆಂಗಳೂರು: ಜಗ್ಗಲ್ಲ, ಬಗ್ಗಲ್ಲ ಎಂದು ಅಧಿಕಾರದ ಮದದಿಂದ ಮೆರೆಯುತ್ತಿದ್ದವರ ವಿರುದ್ಧ ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನಕ್ಕೆ ಸಿಕ್ಕ ದೊಡ್ಡ ಜಯ ಇದು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಮುಡಾ ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವಾಪಸ್ಸು ನೀಡುವುದಾಗಿ ಸೋಮವಾರ ಸಂಜೆ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಆರ್ ಅಶೋಕ್ ಸಿಎಂ ಪತ್ನಿ ಅವರ ಈ ನಡೆ ಸಂವಿಧಾನಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮವಾಗಿ ಪಡೆದಿದ್ದ ಸೈಟುಗಳನ್ನು ವಾಪಸ್ಸು ನೀಡುವ ‘ದೊಡ್ದ’ ಮನಸ್ಸು ಮಾಡಿರುವುದು, ಸಂವಿಧಾನವನ್ನ ರಕ್ಷಿಸಲು ದಿಟ್ಟ ನಿರ್ಧಾರ ಕೈಗೊಂಡ ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ. ರಾಜ್ಯಪಾಲರ ನಿರ್ಧಾರವನ್ನ ಎತ್ತಿ ಹಿಡಿದ ನ್ಯಾಯಾಂಗಕ್ಕೆ ಸಿಕ್ಕ ದೊಡ್ಡ ಜಯ. ಅಲ್ಲದೆ ಜಗ್ಗಲ್ಲ, ಬಗ್ಗಲ್ಲ ಎಂದು ಅಧಿಕಾರದ ಮದದಿಂದ ಮೆರೆಯುತ್ತಿದ್ದವರ ವಿರುದ್ಧ ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನಕ್ಕೆ ಸಿಕ್ಕ ದೊಡ್ಡ ಜಯ ಎಂದು ಬರೆದಿದ್ದಾರೆ.