ದತ್ತ ವಿಜಯಾನಂದ ತೀರ್ಥ ಶ್ರೀಗಳ ಬಣ್ಣನೆ
ಪ್ರತಿನಿಧಿ ವರದಿ ಮೈಸೂರು
ರಾಮಾಯಣ ನಮ್ಮ ಭಾರತದ ಕಣ್ಣು, ಪ್ರಭು ಶ್ರೀರಾಮನ ಆದರ್ಶ ಎಲ್ಲರಿಗೂ ಮಾದರಿ ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಬಣ್ಣಿಸಿದರು.
ದತ್ತ ಪೀಠದ ಆವರಣದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಆ.8 ರಿಂದ ಪ್ರಾರಂಭವಾಗಿದ್ದ ಸಂಪೂರ್ಣ ಶ್ರೀಮದ್ ವಾಲ್ಮೀಕಿ ರಾಮಾಯಣ ಮಹಾಯಾಗದ ಮಹಾ ಪೂರ್ಣಾಹುತಿ ಕಾರ್ಯದಲ್ಲಿ ಪಾಲ್ಗೊಂಡು ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಒಮ್ಮೆಯಾದರೂ ಸಂಪೂರ್ಣ ರಾಮಾಯಣ ಪಾರಾಯಣ ಮಾಡಬೇಕು ಎಂದು ತಿಳಿಸಿದ ಶ್ರೀಗಳು, ಭಾರತ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಶ್ರೀರಾಮ ಎಂಬ ಹೆಸರು ಕೇಳಿದರೆ ಸಾಕು ಮೈ ನವಿರೇಳುತ್ತದೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳ ಹಿಂದೆ ಇಡೀ ನಾಡಿನಲ್ಲಿ ಕರೊನಾ ಬಾಧಿಸುತ್ತಿದ್ದಾಗ ರಾಮಾಯಣ ಪಾರಾಯಣ ಮಾಡಿಸಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಅಂದುಕೊಂಡಿದ್ದರು.
ಪ್ರಾರಂಭದಲ್ಲಿ ಕೆಲ ವಿಘ್ನಗಳು ಬರಲಿದೆ ಎಂದು ಕೂಡ ಶ್ರೀಗಳು ತಿಳಿಸಿದ್ದರು, ನಾನು ಒಳಗೆ ರಾಮಾಯಣ ಪಾರಾಯಣ ಮಾಡಿಕೊಳ್ಳುತ್ತೇನೆ ನೀವು ಮುಂದೆ ಮಾಡಿ ಎಲ್ಲ ಸರಿಯಾಗಲಿದೆ ಎಂದು ಹೇಳಿದ್ದರು. ಅದರಂತೆ ಈಗ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ರಾಮಾಯಣ ಪಾರಾಯಣ ಆಗಿದೆ ಇದಕ್ಕೆ ಈ ಎಲ್ಲ ಹೃತ್ವಿಕರು ಮುಖ್ಯ ಕಾರಣ ಎಂದು ತಿಳಿಸಿದರು.
ಬೆಳಿಗ್ಗೆ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಿಂದ ಸೀತಾರಾಮ ಆಂಜನೇಯ ಸಮೇತ ಉತ್ಸವ ಮೂರ್ತಿಯನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿ ವರೆಗೆ ತರಲಾಯಿತು ಶ್ರೀಗಳು ಈ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.