ಮೈಸೂರು, (ಸೆಪ್ಟೆಂಬರ್ 27): ಬರದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆ ಕಿಚ್ಚು ಜೋರಾಗಿದೆ. ನಿನ್ನೆ(ಸೆ.26) ಬೆಂಗಳೂರು ಬಂದ್ ಮಾಡಲಾಗಿತ್ತು. ಇದೀಗ ಸೆ.29ಕ್ಕೆ ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಇನ್ನು ಇದೇ ಕಾವೇರಿ ನೀರಿನ ವಿಚಾರವಾಗಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ್ದು, ಕಾವೇರಿ ನೀರಿನ ಸಮಸ್ಯೆ ಮತ್ತೊಮ್ಮೆ ಉಲ್ಬಣಿಸಿದೆ. ಪ್ರತಿ ವರ್ಷವೂ ಈ ಸಮಸ್ಯೆ ಉಂಟಾಗುತ್ತಲೇ ಇದೆ ಶತಮಾನಗಳಿಂದ ಇದೊಂದು ಜ್ವಲಂತ ಸಮಸ್ಯೆಯಾಗಿದೆ. ಪ್ರಾರಂಭದ ದಿನಗಳಿಂದಲೂ ತಮಿಳುನಾಡು ತನಗೆ ಅಗತ್ಯವಾದುದಕ್ಕಿಂತ ಹೆಚ್ಚಿನ ನೀರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಲೇ ಇದೆ. ಕರ್ನಾಟಕದ ಕಾವೇರಿ ನದಿ ಪಾತ್ರದ ರೈತರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಮೈಸೂರು ಬೆಂಗಳೂರು ಇತರೆಡೆಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ ಇದಕ್ಕೆ ಅಂತಿಮ ಪರಿಹಾರ ಯಾವಾಗ ಎಂಬುದೇ ಪ್ರಶ್ನಾರ್ಥಕವಾಗಿದೆ ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರವು ಎಲ್ಲಾ ಸಂದರ್ಭಗಳಲ್ಲಿಯೂ ನೆರೆ ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಬಂದಿದೆ. ತನಗೆ ಎಷ್ಟೇ ತೊಂದರೆಗಳಾದರು ನ್ಯಾಯಾಧಿಕರಣ ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಜನಾಭಿಪ್ರಾಯದ ಕಡು ವಿರೋಧದ ನಡುವೆಯೂ ಗೌರವಿಸಿ ಪಾಲಿಸುತ್ತ ಬಂದಿದೆ. ಇದನ್ನು ತಮಿಳುನಾಡಾಗಲಿ ಅಥವಾ ಸಂಬಂಧಪಟ್ಟವರು ಯಾರೇ ಆಗಲಿ ದೌರ್ಬಲ್ಯವೆಂದು ಭಾವಿಸಬಾರದು. ಈ ಸಮಸ್ಯೆಗೆ ಅಂತಿಮ ಪರಿಹಾರದ ಅಗತ್ಯವಿದೆ. ಮಳೆಯನ್ನು ಆಧರಿಸಿ ನೀರಿನ ಸಂಗ್ರಹದ ಆಧಾರದ ಮೇಲೆ ನೀರು ಹಂಚಿಕೆಯ ಬಗೆಗೆ ಪ್ರತಿವರ್ಷವೂ ಕ್ರಮ ತೆಗೆದುಕೊಳ್ಳಬೇಕಾದುದು ಅಗತ್ಯ. ಪ್ರತಿ ವರ್ಷ ಆಯಾ ಕಾಲಕ್ಕೆ ಸರಿಯಾಗಿ ಮಳೆಯಾದರೆ ಈ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಅನಾವೃಷ್ಟಿಯಾದಾಗಲೆಲ್ಲ ಈ ಸಮಸ್ಯೆ ಸಹಜವಾಗಿ ಉಂಟಾಗುತ್ತಲೇ ಇರುತ್ತದೆ. ಇದೀಗ ಉಲ್ಬಣಿಸಿರುವ ಸಮಸ್ಯೆಗೆ ಭಾರತ ಸರ್ಕಾರ, ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧಿಕರಣಗಳು ಸಮಾಲೋಚಿಸಬೇಕು. ಕರ್ನಾಟಕ ತಮಿಳುನಾಡು ಹೊರತಾದ ಹೊರ ರಾಜ್ಯಗಳ ನೀರಾವರಿ ತಜ್ಞರ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.