ದೇಶಾದ್ಯಂತ ಸಂಚಲನ ಮೂಡಿಸಿರುವ ಡೀಪ್ಫೇಕ್ಗಳ ಹಾವಳಿ ತಡೆಯಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಠಿಣ ನಿಯಮಾವಳಿ ಜಾರಿಗೊಳಿಸಲು ಸಿದ್ಧವಾಗಿದೆ. ಅದರಡಿ ಡೀಪ್ಫೇಕ್ಗಳನ್ನು ಸೃಷ್ಟಿಸುವವರು ಹಾಗೂ ಅವುಗಳಿಗೆ ಜಾಗ ನೀಡುವ ಸಾಮಾಜಿಕ ಜಾಲತಾಣಗಳಿಗೆ ಶಿಕ್ಷೆ ವಿಧಿಸಲು ನಿರ್ಧರಿಸಿದೆ. ಈ ಕುರಿತು ಸೋಷಿಯಲ್ ಮೀಡಿಯಾಗಳು ಹಾಗೂ ಕೃತಕ ಬುದ್ಧಿಮತ್ತೆಯ ಜೊತೆ ವ್ಯವಹರಿಸುವ ಕಂಪನಿಗಳ ಜೊತೆ ಗುರುವಾರ ಮಹತ್ವದ ಸಭೆ ನಡೆಸಿದ ಬಳಿಕ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಡೀಪ್ಫೇಕ್ಗಳು ಪ್ರಜಾಪ್ರಭುತ್ವಕ್ಕೆ ಹೊಸ ಅಪಾಯವಾಗಿ ಪರಿಣಮಿಸಿವೆ. ಅಂತಹ ಕಂಟೆಂಟ್ಗಳ ಹೊಣೆಗಾರಿಕೆ ಅವುಗಳನ್ನು ಸೃಷ್ಟಿಸುವವರು ಹಾಗೂ ಅವುಗಳಿಗೆ ಜಾಗ ನೀಡುವ ಸೋಷಿಯಲ್ ಮೀಡಿಯಾ ಇಬ್ಬರ ಮೇಲೂ ಇರುತ್ತದೆ. ಹೀಗಾಗಿ ಡೀಪ್ಫೇಕ್ಗಳ ಸೃಷ್ಟಿಕರ್ತರು ಮತ್ತು ಅವು ಪೋಸ್ಟ್ ಮಾಡಲ್ಪಡುವ ಸಾಮಾಜಿಕ ಜಾಲತಾಣಗಳಿಗೆ ದಂಡ ಹಾಗೂ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಡೀಪ್ ಫೇಕ್ಗಳನ್ನು ಹೇಗೆ ಪತ್ತೆಹಚ್ಚಬೇಕು, ಡೀಪ್ಫೇಕ್ಗಳನ್ನು ಜನರು ಪೋಸ್ಟ್ ಮಾಡುವುದನ್ನು ಹೇಗೆ ತಡೆಯಬೇಕು, ಅಂತಹ ಕಂಟೆಂಟ್ಗಳು ವೈರಲ್ ಆಗುವುದನ್ನು ಹೇಗೆ ತಪ್ಪಿಸಬೇಕು ಮತ್ತು ಅವುಗಳ ಬಗ್ಗೆ ಹೇಗೆ ದೂರು ನೀಡಬೇಕು ಎಂಬ ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಗಿದೆ. ಡೀಪ್ಫೇಕ್ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೋಷಿಯಲ್ ಮೀಡಿಯಾಗಳು, ಸರ್ಕಾರ ಹಾಗೂ ಮಾಧ್ಯಮಗಳು ಏನು ಮಾಡಬಹುದು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿಸಿದರು.
‘ಡೀಪ್ಫೇಕ್ಗಳನ್ನು ತಡೆಯಲು ಹೊಸ ನಿಯಂತ್ರಣ ಕ್ರಮಗಳ ಅಗತ್ಯವಿದೆ ಎಂದು ಚರ್ಚೆಯ ಬಳಿಕ ನಿರ್ಧರಿಸಲಾಗಿದೆ. ತಕ್ಷಣ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ, ಕೆಲ ವಾರಗಳಲ್ಲಿ ನಿಯಮಾವಳಿ ಜಾರಿಗೊಳಿಸಲಾಗುವುದು. ಡಿಸೆಂಬರ್ ಮೊದಲ ವಾರ ಇನ್ನೊಂದು ಸಭೆ ನಡೆಸಲಾಗುವುದು. ಅಷ್ಟರೊಳಗೆ ಸೋಷಿಯಲ್ ಮೀಡಿಯಾಗಳು ಡೀಪ್ಫೇಕ್ ತಡೆಯಲು ತಾವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ. ಅವು ಏನು ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ನೋಡಿ ಮುಂದಿನ ಹೆಜ್ಜೆ ಇರಿಸಲಾಗುವುದು’ ಎಂದೂ ಹೇಳಿದರು.