ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾಹಿತಿ
ಪ್ರತಿನಿಧಿ ವರದಿ ಚಾಮರಾಜನಗರ
ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ಜನರಿಗೆ ಅನುಕೂಲವಾಗುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ನುಡಿದಂತೆ ಸರ್ಕಾರ ನಡೆದುಕೊಂಡಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾಅಮರನಾಥ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣೆಗೂ ಮೊದಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ವಾಗ್ದಾನ ಮಾಡಲಾಗಿತ್ತು. ಅದರಂತೆ ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ನುಡಿದಂತೆ ನಡೆದಿರುವ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಸಮರ್ಪಕವಾಗಿ ತಲುಪಿಸುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ದಕ್ಷಿಣ ಕನ್ನಡ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಭೆ ನಡೆಸಿ ಪ್ರಗತಿ ಪರಾಮರ್ಶೆ ನಡೆಸಿದ್ದೇನೆ. ತಾಲೂಕು ಮಟ್ಟದಲ್ಲಿಯೂ ಸಮಿತಿ ರಚಿಸಿ ಅಲ್ಲಿಯೇ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸುವ ಕಾರ್ಯವು ಮಾಡಲಾಗುತ್ತದೆ. ಯೋಜನೆ ಮುಟ್ಟಿಸುವಲ್ಲಿ ಯಾವುದಾದರೂ ತಾಂತ್ರಿಕ ಅಥವಾ ಇನ್ನಿತರ ತೊಡಕು ಅಡಚಣೆಗಳು ಕಂಡುಬಂದಲ್ಲಿ ಪರಿಹರಿಸುವ ಕೆಲಸವನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಆರ್ಥಿಕ ಶಕ್ತಿ, ಮಹಿಳಾ ಸಬಲೀಕರಣ, ಸ್ವಾಭಿಮಾನ ಹೆಚ್ಚಿಸಲು ಅನುಕೂಲಕರವಾಗಿವೆ. ರಾಜ್ಯದಲ್ಲಿಯೇ ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ 2,73,414 ನೋಂದಣಿಯಾಗಿದ್ದಾರೆ. ಶೇ. 99ರಷ್ಟು ಪ್ರಗತಿಯಾಗಿದ್ದು, ಬಾಕಿ ಉಳಿದಿರುವ ಫಲಾನುಭವಿಗಳಿಗೂ ಯೋಜನೆ ಸೌಲಭ್ಯ ಲಭಿಸಲು ಇರುವ ತೊಡಕುಗಳನ್ನು ಸರಿಪಡಿಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂದರು.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಿರುವ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 6,27,27,062 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ. 99.48ರಷ್ಟು ಸಾಧನೆಯಾಗಿದೆ. 265911 ಗ್ರಾಹಕರು ಯೋಜನೆಗೆ ನೋಂದಾಯಿಸಿದ್ದಾರೆ. ಅನ್ನಭಾಗ್ಯ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 2,89,747 ಪಡಿತರ ಚೀಟಿಗಳಿವೆ. ಒಟ್ಟು ಪಡಿತರ ಫಲಾನುಭವಿಗಳು 8,73,225 ಇದ್ದಾರೆ. ಯುವನಿಧಿ ಯೋಜನೆಯಡಿ 2,175 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಸಿಇಒ ಮೋನಾ ರೋತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು ಇದ್ದರು.
25ಸಿಎಚ್ಎನ್.5: ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಪಂಚ ಗ್ಯಾರಂಟಿ ಯೋಜನೆ ಯಶಸ್ವಿ ಅನುಷ್ಠಾನ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.