ಬೆಂಗಳೂರು: ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್, ಜೈಲಿನಲ್ಲಿ ಇದೆಲ್ಲಾ ಮಾಮೂಲಿ, ಈ ರೀತಿ ಘಟನೆ ಇದೇ ಮೊದಲೇನಲ್ಲ ಎಂದು ನಟ ದರ್ಶನ್ ನಡೆಗೆ ಸಮರ್ಥನೆ ನೀಡಿದ್ದಾರೆ.
ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ನಟೋರಿಯಸ್ ರೌಡಿಗಳ ಜೊತೆ ಆರಾಮವಾಗಿ ಕುಳಿತು ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಕಾಫಿ ಕಪ್ ಹಿಡಿದು ಕುಳಿತಿರುವ ಫೋಟೊ ವೈರಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ನಟ ದರ್ಶನ್ ನಮಗೆ ಆಪ್ತರು, ಅವರ ಬಗ್ಗೆ ಏನೇ ಮಾತನಾಡಿದರು ವಿವಾದ ಸುದ್ದಿಯಾಗುತ್ತದೆ. ಜೈಲಿನ ವಿಚಾರ ಎಲ್ಲರಿಗೂ ಗೊತ್ತು, ಜೈಲಿನಲ್ಲಿ ಇದೆಲ್ಲಾ ಸಾಮಾನ್ಯ, ಈ ಹಿಂದೆಯೂ ಈ ರೀತಿ ಪ್ರಕರಣಗಳು ನಡೆದಿರುತ್ತವೆ. ಇದು ಮೊದಲೇನಲ್ಲ ಜೈಲಿನಲ್ಲಿ ಹೀಗೆಲ್ಲಾ ನಡೆಯುವುದು ಸಾಮನ್ಯ ಎಂಬಂತಾಗಿದೆ ಎಂದರು.
ಅಲ್ಲದೆ “ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಕುರಿತು ಐಪಿಎಸ್ ಅಧಿಕಾರಿ ರೂಪಾ ಈ ಹಿಂದೆಯೇ ಪ್ರಶ್ನೆ ಮಾಡಿದ್ದರು. ಅವರು ಅಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲು ಮಾಡಿದ್ದರು. ಆ ಸಂದರ್ಭದಲ್ಲಿ ಮಾಧ್ಯಮಗಳು ಏಕೆ ಪ್ರಶ್ನಿಸಲಿಲ್ಲ. ಈಗ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡುವುದು ಏಕೆ” ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದ್ದಾರೆ.
“ಜೈಲಲ್ಲಿ ಒಂದಿಷ್ಟು ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ. ಇದು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಲ್ಲಿ ಮಾತ್ರವಲ್ಲ. ಎಲ್ಲಾ ಜೈಲಲ್ಲೂ ಇದು ನಡೆಯುತ್ತದೆ. ಅಮೆರಿಕದ ಜೈಲುಗಳಲ್ಲಿ ಡ್ರಗ್ಸ್, ಮೊಬೈಲ್, ಸಿಗರೇಟು ಎಲ್ಲವೂ ಸಿಗುತ್ತದೆ. ಹಾಗಂತ, ಈ ರೀತಿ ನಡೆಯುವುದು ಸರಿ ಎಂದು ಹೇಳುತ್ತಿಲ್ಲ. ಇದು ವ್ಯವಸ್ಥೆಯ ಭ್ರಷ್ಟಾಚಾರ. ಆದರೆ, ಮಾಧ್ಯಮಗಳು ಸದ್ಯ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಪ್ರಶ್ನೆ ಮಾಡ್ತಾ ಇದ್ದೀರಿ. ಜೈಲು ವ್ಯವಸ್ಥೆಯನ್ನು ಸಚಿವಾಲಯವು ಸರಿಮಾಡಬೇಕು” ಎಂದು ಸುಮಲತಾ ಪ್ರತಿಕ್ರಿಯೆ ನೀಡಿದರು.
ಇದೇ ಸಂದರ್ಭದಲ್ಲಿ ನಟೋರಿಯಸ್ ರೌಡಿಗಳ ಜತೆ ನಟ ದರ್ಶನ್ ಒಡನಾಟದ ಕುರಿತು ಸುಮಲತಾ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. “ಜೈಲಲ್ಲಿ ಒಳ್ಳೆಯವರು ಇರುತ್ತಾರ? ಜೈಲಲ್ಲಿ ಸಾಮಾನ್ಯವಾಗಿ ಅಪರಾಧ ಮಾಡಿ ಹೋದವರೇ ಇರುತ್ತಾರೆ. ಜೈಲಲ್ಲಿ ದರ್ಶನ್ ಯಾರ ಜತೆಯೂ ಮಾತನಾಡಬಾರದೇ?” ಎಂದು ಸುಮಲತಾ ಪ್ರಶ್ನಿಸಿದ್ದಾರೆ.