ಸುನಿತಾ ವಿಲಿಯಮ್ಸ್.. ಭಾರತದ ಹೆಮ್ಮೆಯ ಕುವರಿ.. ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸಾಹಸಿ ಗಗನಯಾತ್ರಿ..! ಕೋಟ್ಯಂತರ ಮನಸ್ಸುಗಳು ಜೀವಬಿಗಿದಿಟ್ಟು ಕೊಂಡಿದ್ದ ಘಳಿಗೆ ಕೊನೆಗೂ ಬಂದಿದ್ದು, ಸುನಿತಾ ಅಂತರಿಕ್ಷದಿಂದ ಭೂಮಿಗೆ ಮರಳಿದ್ದಾರೆ.
ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ 9 ತಿಂಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ವಾಪಸ್ ಆಗಿದ್ದಾರೆ. 9 ತಿಂಗಳ ಬಳಿಕ ಸುರಕ್ಷಿತವಾಗಿ ಗಗನಯಾತ್ರಿಗಳು ಭೂಮಿಗೆ ಹಿಂದಿರುಗಿದ್ದು, ನಗುಮುಖದೊಂದಿಗೆ ಡ್ರ್ಯಾಗನ್ ನೌಕೆಯಿಂದ ಸುನಿತಾ ವಿಲಿಯಮ್ಸ್ ಹೊರ ಬಂದಿದ್ದಾರೆ.

ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಬುಧವಾರ ಬೆಳಗ್ಗೆ ಸರಿಯಾಗಿ 3.27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿಳಿದಿದ್ದು, ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ನೌಕೆ ಇವರಿಬ್ಬರನ್ನು ಭೂಮಿಗೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ.
ಬಾಹ್ಯಾಕಾಶದಿಂದ ಭೂಮಿಗೆ ಬರೋಬ್ಬರಿ 17 ಗಂಟೆಗಳ ಜರ್ನಿ ಸಕ್ಸಸ್ ಆಗಿದ್ದು, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಜೊತೆ ನಿಕ್ ಹೇಗ್, ಅಲೆಕ್ಸಾಂಡರ್ ಗೋರ್ಬನೋವ್ ಕೂಡ ವಾಪಸ್ ಆಗಿದ್ದಾರೆ.
ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜೂನ್ 5, 2024ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅವರ ಪ್ರವಾಸ ಕೇವಲ 8 ದಿನಗಳದ್ದಾಗಿತ್ತು. ಆದರೆ ಅವರು ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್ಲೈನರ್ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ 9 ತಿಂಗಳ ಕಾಲ ಸುನಿತಾ ವಿಲಿಯಮ್ಸ್ ಅಲ್ಲಿಯೇ ಇರಬೇಕಾಗಿತ್ತು. ಇದೀಗ ಸೇಫ್ ಆಗಿ ಭೂಮಿಗೆ ವಾಪಾಸ್ ಬಂದಿದ್ದಾರೆ
ಇನ್ನು, ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 900 ಗಂಟೆಗಳ ಸಂಶೋಧನೆ ಪೂರ್ಣಗೊಳಿಸಿದೆ. 150ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿ ಹೊಸ ದಾಖಲೆ ಬರೆದಿದ್ದಾರೆ. ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಕಳೆದ ಮಹಿಳೆ ಎಂಬ ದಾಖಲೆಗೂ ಸುನಿತಾ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣದ ಹೊರಗೆ 62 ಗಂಟೆ 9 ನಿಮಿಷಗಳನ್ನು ಕಳೆದಿದ್ದಾರೆ. 9 ಬಾರಿ ಬಾಹ್ಯಾಕಾಶ ನಡಿಗೆ ಮಾಡಿ ಸುನಿತಾ ದಾಖಲೆ ಸೃಷ್ಟಿಸಿದ್ದಾರೆ .

ಬಾಹ್ಯಾಕಾಶ ನೌಕೆಯು ಬೇರ್ಪಡುವ ವೀಡಿಯೊವನ್ನು ನಾಸಾ ಹಂಚಿಕೊಂಡಿದೆ. ಕ್ರೂ-9 ಅನ್ನು ಭೂಮಿಗೆ ಮರಳಿ ತರುವ ಜವಾಬ್ದಾರಿಯನ್ನು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್‌ಗೆ ವಹಿಸಲಾಗಿತ್ತು. ಫಾಲ್ಕನ್ 9 ರಾಕೆಟ್‌ನ ಮೇಲಿರುವ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಈ ಕಾರ್ಯಾಚರಣೆಗಾಗಿ ಉಡಾವಣೆ ಮಾಡಲಾಗಿತ್ತು. ಅಂತಿಮವಾಗಿ ಎಲ್ಲಾ ಗಗನಯಾತ್ರಿಗಳು ಸೇಫ್ ಆಗಿ ಲ್ಯಾನ್ಡ್ ಆಗಿದ್ದಾರೆ. ನಾಸಾ ವಿಜ್ಞಾನಿಗಳ ಈ ಅಭೂತಪೂರ್ವ ಪ್ರಯತ್ನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
