ದೆಹಲಿ ಏಪ್ರಿಲ್ 01: ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಕಳುಹಿಸಿದ ನೋಟಿಸ್ ಪ್ರಶ್ನಿಸಿ ಪಕ್ಷ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠ ಸೋಮವಾರ ನಡೆಸಿದೆ. ₹1,823 ಕೋಟಿ ದಂಡದ ಜೊತೆಗೆ ಇನ್ನೂ ಎರಡು ನೋಟಿಸ್ಗಳನ್ನು ಪಡೆದಿದ್ದೇವೆ ಎಂದು ಕಾಂಗ್ರೆಸ್ ಹೇಳಿದ ಎರಡು ದಿನಗಳ ನಂತರ ಇಂದು ವಿಚಾರಣೆ ನಡೆದಿದೆ. ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನಾನು ಈ ವಿಷಯದಲ್ಲಿ ಹೇಳಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿದ್ದು, ಚುನಾವಣೆಗಳು ನಡೆಯುತ್ತಿರುವುದರಿಂದ ನಾವು ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಲು ಹೋಗುವುದಿಲ್ಲ ಎಂದಿದ್ದಾರೆ. ಇದಲ್ಲದೆ, ಚುನಾವಣೆ ಮುಗಿಯುವವರೆಗೆ ಐಟಿ ಇಲಾಖೆ ಏನನ್ನೂ ವಸೂಲಿ ಮಾಡುವುದಿಲ್ಲ ಎಂದು ಐಟಿ ಹೇಳಿರುವುದಾಗಿ ಕೇಂದ್ರ ಹೇಳಿದೆ.
ಕಾಂಗ್ರೆಸ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಈ ನಿಲುವು ಶ್ಲಾಘಿಸಿದ್ದು, ಇದು “ಖುಷಿಯ ಸಂಗತಿ” ಎಂದಿದ್ದಾರೆ. ಮಾರ್ಚ್ನಲ್ಲಿ ಮತ್ತು ಅದಕ್ಕೂ ಮೊದಲು ವಿವಿಧ ವರ್ಷಗಳಿಂದ ಸುಮಾರು 3,500 ಕೋಟಿ ರೂ.ಗಳ ಎಲ್ಲಾ ಬೇಡಿಕೆ ನೋಟಿಸ್ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.ಕಾಂಗ್ರೆಸ್, ಮಾರ್ಚ್ 29 ರಂದು ಐಟಿ ಇಲಾಖೆಯಿಂದ 1,823 ಕೋಟಿ ರೂ.ಗಳ ಬೇಡಿಕೆಯ ನೋಟಿಸ್ ಅನ್ನು ಸ್ವೀಕರಿಸಿದೆ. ಮೂಲಗಳ ಪ್ರಕಾರ, ಪಕ್ಷಕ್ಕೆ ನೀಡಲಾದ ಹೊಸ ಸೂಚನೆಯು 2017-18 ರಿಂದ 2020-21 ರ ಮೌಲ್ಯಮಾಪನ ವರ್ಷಗಳಿಗೆ ದಂಡ ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ.
ಆದಾಯ ತೆರಿಗೆ ಇಲಾಖೆಯ ನೋಟಿಸ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದು ಇದು “ತೆರಿಗೆ ಭಯೋತ್ಪಾದನೆ” ಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದು, ಸರ್ಕಾರ ಬದಲಾದಾಗ ಪ್ರಜಾಪ್ರಭುತ್ವವನ್ನು ಹಾಳು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.