ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಮತ್ತು ರಾಬರ್ಟ್ ಬೆಡಗಿ ಸೊನಾಲ್ ಮೊಂಥಾರೋ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸ್ಟಾರ್ ಜೋಡಿಗಳ ಲಿಸ್ಟ್ ನಲ್ಲಿ ಸೇರಲಿರುವ ಈ ಜೋಡಿ ನಿನ್ನೆಯಷ್ಟೇ ಅರಿಶಿನ ಶಾಸ್ತ್ರ ಮುಗಿಸಿದೆ. ಅರಿಶಿನ ಶಾಸ್ತ್ರದಲ್ಲಿ ಸ್ಟಾರ್ ನಟನಟಿಯರು ಭಾಗಿಯಾಗಿದ್ದಾರೆ. ಮೈತುಂಬಾ ಅರಿಶಿನ ಹಚ್ಚಿಕೊಂಡು ಫೋಟೋ ಗೆ ಸಕತ್ ಪೋಸ್ ಕೊಟ್ಟಿದ್ದಾರೆ.
ಸೋನಲ್ ಹಾಗೂ ತರುಣ್ ಎಲ್ಲಿಯೂ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿರಲಿಲ್ಲ. ಗಾಂಧಿನಗರದಲ್ಲಿ ಆಗಾಗ ಇವರಿಬ್ಬರ ಲವ್ ಸ್ಟೋರಿ ಗುಸುಗುಸು ಕೇಳುತ್ತಿತ್ತಾದ್ರೂ ಎಲ್ಲಿಯೂ ತಮ್ಮ ಪ್ರೀತಿ ವಿಚಾರವನ್ನ ಬಹಿರಂಗಪಡಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜೋಡಿಯು ವೀಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನ ಅಧಿಕೃತವಾಗಿ ಹಂಚಿಕೊಂಡಿದ್ರು.
ಲಗ್ನ ಪತ್ರಿಕೆಯ ಕ್ರಿಯೇಟಿವಿಟಿಯಲ್ಲೂ ಬಹಳ ಸುದ್ದಿಯಲ್ಲಿದ್ದ ಈ ಜೋಡಿ ನಿನ್ನೆ ಬೆಂಗಳೂರಿನ ಹೊರವಯಲದ ಖಾಸಗಿ ರೆಸಾರ್ಟ್ ಒಂದರಲ್ಲಿ ಅರಿಶಿನ ಶಾಸ್ತ್ರವನ್ನ ಮುಗಿಸಿದ್ದಾರೆ. ಅರಿಶಿನ ಶಾಸ್ತ್ರದಲ್ಲಿ ಎರಡೂ ಕುಟುಂಬಗಳು, ಆಪ್ತರು ಹಾಗೂ ಸ್ನೇಹಿತರು ಭಾಗಿಯಾಗಿದ್ದು, ಸ್ಯಾಂಡಲ್ವುಡ್ ನ ಬಹುತೇಕರು ಭಾಗಿಯಾಗಿದ್ದಾರೆ.ವೇದಿಕೆಗೆ ಕೈ-ಕೈ ಹಿಡಿದು ಕ್ರೀಂ ಮತ್ತು ಹಳದಿ ಬಣ್ಣದ ಕಾಸ್ಟ್ಯೂಮ್ನಲ್ಲಿ ಜೋಡಿ ಎಂಟ್ರಿ ಕೊಟ್ಟಿದ್ದು, ಅರಿಶಿನದ ಶಾಸ್ತ್ರವನ್ನ ಮುಗಿಸಿದ್ದಾರೆ. ಜೋಡಿಯ ಜೊತೆ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಅಧ್ಯಕ್ಷ ಶರಣ್ ಜೊತೆಗೂಡಿ ಫೋಸ್ ಕೊಟ್ಟಿದ್ದಾರೆ.
ಇಂದು (ಶನಿವಾರ) ಜೋಡಿಯ ಆರತಕ್ಷತೆ ಕಾರ್ಯಕ್ರಮ ಜರುಗಲಿದ್ದು, ನಾಳೆ( ಭಾನುವಾರ) ತರುಣ್ ಸುಧೀರ್ ಅವರು ಸೊನಾಲ್ ಮಂಥೆರೋ ಅವರನ್ನ ವರಿಸಲಿದ್ದಾರೆ. ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ತರುಣ್ ಸುಧೀರ್ ಮನೆಯ ಸಂಪ್ರದಾಯದಂತೆ ಹಸೆಮಣೆ ಏರಲಿರುವ ಜೋಡಿ, ಕ್ರೈಸ್ತ ಸಂಪ್ರದಾಯದಂತೆ ಮಂಗಳೂರಿನಲ್ಲಿ ಮತ್ತೆ ಮದುವೆಯಾಗಲಿದ್ದಾರೆ.
ಈಗಾಗಲೇ ಮದುವೆ ಸಂಭ್ರಮ ಶುರುವಾಗಿದ್ದು, ಮದುವೆ ಮನೆಯ ಥೀಮ್ ಮದುಮಕ್ಕಳ ಲುಕ್ಗಾಗಿ ಎಲ್ಲರೂ ಕಾತುರರಾಗಿದ್ದಾರೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಸ್ಟಾರ್ ಜೋಡಿ ಭವಿಷ್ಯ ಉಜ್ವಲವಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.