ಕಡ್ಡಾಯ ಸುದ್ದಿ
– ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ
ಪ್ರತಿನಿಧಿ ವರದಿ ಮೈಸೂರು
ಮಕ್ಕಳನ್ನು ಕೇವಲ ವಿದ್ಯಾವಂತರಾಗದೆ, ಉತ್ತಮ ಸಂಸ್ಕಾರವಂತರನ್ನಾಗಿ ರೂಪಿಸಬೇಕಿದೆ ಎಂದು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿ ನಡೆದ ವೈ.ಕೆ.ಅಮೃತಾಬಾಯಿ ಎಸ್.ಕೆ. ಸುರಮಾಬಾಯಿ ಭಗನಿ ಸೇವಾ ಸಮಾಜ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಶ್ರೀ ವಿಜಯ ವಿಠ್ಠಲ ವಿದ್ಯಾ ಪ್ರತಿಷ್ಠಾನದ ವತಿಯಿಂದ ನಿರ್ಮಾಣಗೊಂಡಿರುವ ಬಿಎಸ್ಎಸ್ ವಿದ್ಯೋದಯ ಶಾಲೆಯ ಪ್ರಾರಂಭೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಿನದಲ್ಲಿ ದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಮಹಿಳೆಯರನ್ನು ಕೊಲೆ ಮಾಡಿ ರಕ್ತ ಹರಿಯುವಂತೆ ಮಾಡಿರುವುದು ದುಃಖಕರ ಸಂಗತಿಯಾಗಿದೆ. ಹೆಣ್ಣು ಮಕ್ಕಳನ್ನು ಭೋಗದ ವಸ್ತುಗಳಂತೆ ನೋಡದೆ ಭಗನಿಯರಂತೆ ಕಾಣಬೇಕು. ಸೋದರಿಯಂತೆ ನೋಡಬೇಕು. ಹೆಣ್ಣು ಮಕ್ಕಳು ಸಮಾಜ ಸೇವೆಗೆ ಅರ್ಪಿಸಿಕೊಂಡಾಗ ಸಾಮಾಜಿಕ ವ್ಯವಸ್ಥೆೆಯು ಉತ್ತಮಗೊಳ್ಳುತ್ತದೆ. ಹೀಗಾಗಿ ಮಕ್ಕಳು ಕೇವಲ ವಿದ್ಯಾವಂತರಾಗುವ ಜೊತೆಗೆ ಸಂಸ್ಕಾರವಂತರಾಗಬೇಕು. ದೇಶಪ್ರೇಮ-ದೇವ ಪ್ರೇಮವನ್ನು ಬೆಳಸಿಕೊಳ್ಳಬೇಕು. ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಲ್ಲೇ ಉತ್ತಮ ಸಂಸ್ಕಾರವನ್ನು ಕಲಿಸಬೇಕು. ಇದಕ್ಕಾಗಿ ಶಿಕ್ಷಕರು ಶಿಕ್ಷೆೆ ಕೊಡವವನಾಗದೆ, ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗುತ್ತದೆ ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜ್ಞಾನದೊಂದಿಗೆ ಸಂಸ್ಕಾರವೂ ಬಹಳ ಮುಖ್ಯ. ವಿದ್ಯೆೆ ಮತ್ತು ಸಂಸ್ಕಾರ ಕೂಡಿದರೆ ವ್ಯಕ್ತಿಯು ಅತ್ಯುತ್ತಮನಾಗುತ್ತಾನೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೊಡಿಸಬೇಕು. ಇಂದು ಪೋಷಕರು ಮಕ್ಕಳು ಏನೇ ತಪ್ಪು ಮಾಡಿದರು ಸರಿ ಹೋಗುತ್ತಾರೆ ಎಂಬ ಮನೋಭಾವದಲ್ಲಿ ಮಕ್ಕಳಿಗೆ ಬುದ್ಧಿ ಹೇಳುವುದಿಲ್ಲ. ಆದರೆ ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ ಎನ್ನುವಂತೆ, ಮಕ್ಕಳು ದೊಡ್ಡವರಾದ ಮೇಲೆ ಸರಿದಾರಿಗೆ ತರಲು ಆಗುವುದಿಲ್ಲ. ಆದ್ದರಿಂದ ಪೋಷಕರು ಸಂಸ್ಕಾರವನ್ನು ಕಲಿಸಬೇಕು ಎಂದರು.
ಸಮಾರಂಭದಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕಾರ್ಯಾಧ್ಯಕ್ಷ ಬಿ. ಶ್ರೀನಿವಾಸ್, ಗೌರವ ಕಾರ್ಯದರ್ಶಿ ಆರ್. ವಾಸುದೇವ್ ಭಟ್, ಖಜಾಂಚಿ ಎಚ್. ಸ್ವರ್ಣಕುಮಾರ್, ಪದ್ಮಜಾ ಶ್ರೀನಿವಾಸ್, ವಂದನಾ ಗೋವಿಂದ ಕೃಷ್ಣ, ಕೆ.ಎಸ್.ಗುರುರಾಜ, ಎಚ್. ಮುರುಳೀಧರ್ ಭಟ್, ಅಪರ್ಣಾ ಶ್ರೀನಿವಾಸ್ ಮತ್ತಿತರರಿದ್ದರು.
==================