ಬೆಂಗಳೂರು, ಜ.5: ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಧನ ಖಂಡಿಸಿ ಬಿಜೆಪಿ (BJP) ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ನಾಯಕರು “ನಾನು ಕರಸೇವಕ-1992, ನನ್ನನ್ನೂ ಬಂಧಿಸಿ” ಅಭಿಯಾನ ನಡೆಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ (Congress) ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ. ಬಿಜೆಪಿಗರೆಲ್ಲರೂ ನನ್ನನ್ನೂ ಬಂಧಿಸಿ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೆ, ಕಾಂಗ್ರೆಸ್ ಹಂಚಿಕೊಂಡ ವಿಜಯೇಂದ್ರ ಅವರ ಎಡಿಟೆಡ್ ಪೋಸ್ಟರ್ನಲ್ಲಿ, ನಾನು RTGS ಮೂಲಕ ಲಂಚ ಪಡೆದಿದ್ದೇನೆ, 40,000 ಕೋಟಿಯ ಅಕ್ರಮದಲ್ಲಿ ಪಾಲುದಾರ, ನನ್ನನ್ನು ಬಂಧಿಸಿ ಎಂದು ಬರೆಯಲಾಗಿದೆ.
ರಾಜ್ಯ ಬಿಜೆಪಿ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು. ಸಿಟಿ ರವಿ ಅವರೇ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ? ಎಂದು ಟ್ವೀಟ್ ಮಾಡಿದೆ. ಅಲ್ಲದೆ, ಕಾಂಗ್ರೆಸ್ ಹಂಚಿಕೊಂಡ ಸಿಟಿ ರವಿ ಅವರ ಎಡಿಟೆಡ್ ಪೋಸ್ಟರ್ನಲ್ಲಿ, ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ, ನನ್ನನ್ನೂ ಬಂಧಿಸಿ ಎಂದು ಎಡಿಟೆಡ್ ಪೋಸ್ಟರ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದೆ.
ಇತ್ತೀಚೆಗೆ ಸಂಸತ್ ಅಧಿವೇಶನ ನಡೆಯುತ್ತಿದ್ದಾಗ ಸ್ಮೋಕ್ ಬಾಂಬ್ ದಾಳಿ ನಡೆಸಿದ ಘಟನೆ ನಡೆದಿತ್ತು. ಇದನ್ನೇ ಮುಂದಿಟ್ಟುಕೊಂಡು ಸಂಸದ ಪ್ರತಾಪ್ ಸಿಂಹ ವಿರುದ್ಧ ಟ್ವೀಟ್ ಮಾಡಿದ ಕಾಂಗ್ರೆಸ್, ಪ್ರತಾಪ್ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ! ಎಂದು ಸವಾಲು ಹಾಕಿದ್ದಾರೆ. ಸಂಸದರ ವಿರುದ್ಧ ಹಂಚಿಕೊಂಡ ಪೋಸ್ಟರ್ನಲ್ಲಿ, ನಾನು ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟು ಸಹಕರಿಸಿದ್ದೇನೆ, ನನ್ನನ್ನೂ ಬಂಧಿಸಿ ಎಂದು ಬರೆಯಲಾಗಿದೆ.