- 2020ರಲ್ಲೇ ಆದೇಶವಾಗಿದ್ದರೂ ಕಾರ್ಯಾಚರಣೆ ನನೆಗುದಿಗೆ
- ದಿಟ್ಟ ಕಾನೂನು ಕ್ರಮದ ನಿರೀಕ್ಷೆಯಲ್ಲಿ ಸಾರ್ವಜನಿಕರು
ಚಿಕ್ಕಮಾಳಿಗೆ ಕೊಳ್ಳೇಗಾಲ
ನಗರಸಭೆಯ 1ನೇ ವಾರ್ಡ್ ಗೆ ಸೇರಿದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ 5ನೇ ಸರ್ಕಾರಿ ಅಡ್ಡ ರಸ್ತೆಯನ್ನು ಅಲ್ಲಿನ 19ಕ್ಕೂ ಹೆಚ್ಚು ನಿವಾಸಿಗಳು ಅತಿಕ್ರಮಿಸಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಲ್ಲಿ ನಗರಸಭಾ ಆಡಳಿತ ವಿಫಲವಾಗಿದೆ.
ಈ ರಸ್ತೆಯನ್ನು ಮನಸೋ ಇಚ್ಛೆ ಅತಿಕ್ರಮಿಸಿಕೊಂಡಿರುವ ನಿವಾಸಿಗಳು ನಗರಸಭಾ ಆಡಳಿತಕ್ಕೆ ಸವಾಲಾಗಿದ್ದಾರೆ. ಅತಿಕ್ರಮವಾಗಿರುವ ಈ ರಸ್ತೆಯನ್ನು ಕೂಡಲೇ ನಿಯಮಾನುಸಾರ ತೆರವುಗೊಳಿಸಿ ಮತ್ತು ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ 2020 ಜ.17 ರಂದು ಆಗಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ನಗರಸಭಾ ಆಡಳಿತಕ್ಕೆ ಲಿಖಿತ ಆದೇಶ ಹೊರಡಿಸಿದ್ದರು. ಆದರೆ, ಕೋವಿಡ್-19 ತುರ್ತು ಸಂದರ್ಭ ಎದುರಾದ ಹಿನ್ನೆಲೆಯಲ್ಲಿ ಈ ಆದೇಶ ಪಾಲನೆಯಾಗಲಿಲ್ಲ. ನಂತರದಲ್ಲಿ ಈ ಕುರಿತು ಪ್ರತಿನಿಧಿ ಪತ್ರಿಕೆ ಪ್ರಕಟಿಸಿದ್ದ ವರದಿ ಆಧರಿಸಿ ಹಿಂದಿನ ನಗರಸಭಾ ಪೌರಾಯುಕ್ತ ಎಂ.ರಾಜಣ್ಣ ಸ್ಥಳ ಪರಿಶೀಲಿಸಿದರಲ್ಲದೆ, ಪೊಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಲು ಸಿದ್ದತೆ ಕೈಗೊಂಡಿದ್ದರು. ಆದರೆ ಅದ್ಯಾಕೋ ತೆರವು ಕಾರ್ಯಾಚರಣೆ ಒಂದೆಡೆ ವಿಳಂಬವಾಯಿತು. ಮತ್ತೊಂದೆಡೆ, ಪೌರಾಯುಕ್ತರು, ಹಿಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ನೀಡಿದ್ದ ಆದೇಶವನ್ನು ಉಲ್ಲೇಖಿಸಿ ಮತ್ತೆ ಹಾಲಿ ಜಿಲ್ಲಾಧಿಕಾರಿಯೂ ಆದ ನಗರಸಭಾ ಆಡಳಿತಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಹೊಸದಾಗಿ 2023 ಆ.1 ರಂದು ಪತ್ರ ಬರೆದು ರಸ್ತೆ ಅತಿಕ್ರಮಣ ತೆರವುಗೊಳಿಸಲು ಮರು ಆದೇಶ ನೀಡುವಂತೆ ಮನವಿ ಮಾಡಿದ್ದರು.
ವಿಪರ್ಯಾಸವೆಂದರೆ, 1 ವರ್ಷ ಸಮೀಪಿಸುತ್ತಿದ್ದರೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಂದ ಮರು ಆದೇಶ ದೊರೆತಿಲ್ಲ. ಹೀಗಾದರೆ, ಸರ್ಕಾರಿ ರಸ್ತೆಗಳು ಉಳಿಯುವುದಾದರೂ ಹೇಗೆ ಎಂಬ ಪಟ್ಟಣದ ಪ್ರಜ್ಞಾವಂತ ನಾಗರಿಕರ ಪ್ರಶ್ನೆಗೆ ಉತ್ತರಿಸುವವರ್ಯಾರು ಎಂಬಂತಾಗಿದೆ. ಇನ್ನಾದರೂ ನಗರಸಭಾ ಆಡಳಿತ ದಿಟ್ಟ ಕಾನೂನು ಕ್ರಮ ಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಕರಣ ಹಿನ್ನೆಲೆ: 1969ರಲ್ಲಿ ಕೊಳ್ಳೇಗಾಲ ತಾಲೂಕು ಕ್ಷೇತ್ರಾಭಿವೃದ್ಧಿ ಕಚೇರಿ ವತಿಯಿಂದ ಉಚಿತವಾಗಿ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ 228 ಅರ್ಹ ಪರಿಶಿಷ್ಟಜಾತಿ ಫಲಾನುಭವಿಗಳಿಗೆ 34ಘಿ 42 ಅಡಿ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೆ, ಈ ಬಡಾವಣೆಯಲ್ಲಿ ಸಾರ್ವಜನಿಕರು ಸಂಚರಿಸಲು ಬೆಂಗಳೂರು ಹೆದ್ದಾರಿಯಿಂದ ಒಟ್ಟು 11 ಸರ್ಕಾರಿ ಅಡ್ಡ ರಸ್ತೆಗಳನ್ನು ನಿರ್ಮಿಸಿ, ನಕ್ಷೆ ತಯಾರಿಸಿದ್ದು, ಈ ಬಡಾವಣೆ ಪ್ರಸ್ತುತ ನಗರಸಭಾ ಆಡಳಿತಕ್ಕೊಪಟ್ಟಿದೆ. ಈ ನಡುವೆ, ಒಟ್ಟು 11 ರಸ್ತೆಗಳ ಪೈಕಿ 15 ಅಡಿ ಅಗಲದ 5ನೇ ಅಡ್ಡ ರಸ್ತೆಯನ್ನು 4 ಮತ್ತು 6ನೇ ರಸ್ತೆಗೆ ಹೊಂದಿಕೊಂಡಿರುವ 19ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳಿಗೆ ಹೊಂದಿಕೊಂಡಂತೆ ಅಲ್ಲಲ್ಲಿ ಇಷ್ಟಾನುಸಾರ ಆಕ್ರಮಿಸಿಕೊಂಡಿದ್ದು, ಇವರಲ್ಲಿ ಕೆಲವರು ಗಿಡ, ಮರಗಳನ್ನು ಬೆಳೆಸಿಕೊಂಡರೆ, ಹಲವರು ರಸ್ತೆಗೆ ಅಡ್ಡಲಾಗಿ ಕಾಂಪೌಂಡ್, ಶೌಚಗೃಹ, ಸ್ನಾನಗೃಹ ಹಾಗೂ ಹೆಂಚಿನ ಮನೆ ಮತ್ತು ಆರ್ಸಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.
5ಕೆಜಿಎಲ್-3 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ 5ನೇ ಸರ್ಕಾರಿ ಅಡ್ಡ ರಸ್ತೆ ನಿವಾಸಿಗಳಿಂದಲೇ ಒತ್ತುವರಿಯಾಗಿದೆ.