ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ವಿರುದ್ಧ ವಿಜಯಪುರದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದಿಗೆ 4 ದಿನ ಪೂರೈಸಿದೆ. ಆದರೂ ಯತ್ನಾಳ್ ಪಟ್ಟು ಸಡಿಲಿಸದೆ, ಪ್ರತಿಭಟನಾ ಧರಣಿ ಮುಂದುವರಿಸಿದ್ದಾರೆ.
ವಕ್ಫ್ ಹಠಾವೋ ದೇಶ್ ಬಚಾವೋ ಎಂಬ ಶೀರ್ಷಿಕೆಯಡಿ ಧರಣಿ ನಡೆಸಲಾಗುತ್ತಿದ್ದು, ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದನ್ನು ಖಂಡಿಸಿ ಪ್ರತಿಭಟಿಸಲಾಗುತ್ತಿದೆ. ವಕ್ಫ್ ಹೆಸರು ತೆಗೆದುಹಾಕುವಂತೆ ಆಗ್ರಹಿಸಿ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ನೇತೃತ್ವದಲ್ಲಿ ಅಹೋರಾತ್ರಿ ಧರಣಿಯಲ್ಲಿ ಆಗ್ರಹಿಸಲಾಗಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ ಎಂಬ ಸ್ಪಷ್ಟ ಸಂದೇಶ ಕೂಡ ರವಾನೆಯಾಗಿದ್ದು, ಈ ಧರಣಿ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸದೆ.
ನಮ್ಮ ಪ್ರತಿಭಟನೆ ಉದ್ದೇಶ ಕಾಂಗ್ರೆಸ್ ನಾಯಕರು ನುಂಗಿರುವ ಆಸ್ತಿಯ ವಾಪಸ್ ಪಡೆದು ರಕ್ಷಣೆ ಮಾಡುವುದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ಅದನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ.ರೈತರ ಜಮೀನು, ಮಠಗಳು, ಸಂಘ-ಸಂಸ್ಥೆಗಳ ದಾಖಲೆಗಳಲ್ಲಿ ವಕ್ಫ್ ಎಂದು ಸೇರಿಸುತ್ತಿದ್ದಾರೆ. ಹೀಗಾಗಿ ಜನರು ಹೊರಗಡೆ ಬಂದು ಹೋರಾಟ ಮಾಡಿ ನಮ್ಮ ದೇಶ, ಧರ್ಮ, ಭೂಮಿ ರಕ್ಷಣೆ ಮಾಡಿಕೊಳ್ಳಬೇಕು. ವಕ್ಫ್ ಆಸ್ತಿ ಒತ್ತುವರಿಯಾಗಿದ್ದನ್ನು ತೆರವು ಮಾಡಿ ಮೂಲ ಮಾಲೀಕರಿಗೆ ನೀಡಬೇಕು. ಎಲ್ಲ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಯತ್ನಾಳ್ ಒತ್ತಾಯ ಮಾಡಿದ್ದಾರೆ.