ಪಿರಿಯಾಪಟ್ಟಣ: ಮಹಿಳೆಯರು ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಆರ್ ನಿರೂಪಾ ರಾಜೇಶ್ ತಿಳಿಸಿದರು.
ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪಿರಿಯಾಪಟ್ಟಣ ಯೋಜನಾ ಕಚೇರಿ ವತಿಯಿಂದ ನಡೆದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದರು.
ಸಮಾಜ ಸೇವಕಿ ಶುಭಗೌಡ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ಮಹಿಳಾ ಸಬಲೀಕರಣವಾದರೆ ದೇಶದ ಅಭಿವೃದ್ಧಿಯಾದಂತೆ ಎಂದರು.
ಪಟ್ಟಣದ ಎಸ್ ಬಿಐ ವ್ಯವಸ್ಥಾಪಕಿ ಸೌಮ್ಯ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಗೃಹ ಉಪಯೋಗಿ ಸೇರಿದಂತೆ ಹಲವು ವಿವಿಧ ಕಾರ್ಯ ಚಟುವಟಿಕೆಗಳಿಗೆ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ದೊರೆಯುತ್ತಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಮಹಿಳೆಯರು ಜಾಗೃತರಾದರೆ ಸಮಾಜದ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಿದ ಕೆರೆ ಹಸ್ತಾಂತರ, ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ, ಸಾಧಕ ಮಹಿಳೆಯರಿಗೆ ಸನ್ಮಾನ, ಮಾದರಿ ಕೇಂದ್ರಗಳನ್ನು ಗುರುತಿಸಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಯೋಜನಾಧಿಕಾರಿ ಸುರೇಶ್ ಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪೂಜಾ ಹಾಗೂ ಸಂಚಾಲಕರು, ಮುಖಂಡ ಎಚ್.ಡಿ ರಾಜೇಂದ್ರ, ಯಾದವಾಚಾರ್, ಲೋಕೇಶ್, ಸೇವಾ ಪ್ರತಿನಿಧಿಗಳು ಹಾಗೂ ವಿವಿಧ ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.