ಬೆಂಗಳೂರು: ಚಂದನವನದ ಪವರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಅಪ್ಪು ಅಭಿಮಾನಿಗಳನ್ನ ಅಗಲಿ ಇಂದಿಗೆ 3 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಇಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರೋ ಅಪ್ಪು ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಮಂಗಳವಾರ ಬೆಳಿಗ್ಗೆಯಿಂದಲೇ ಅಪ್ಪು ಸಮಾಧಿಗೆ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ ಅಲ್ಲದೆ ಪ್ರೀತಿಯ ರಾಜಕುಮಾರನನ್ನ ನೆನೆದು ಭಾವುಕರಾಗಿದ್ದಾರೆ. ಸಮಾಧಿಗೆ ಬಣ್ಣಬಣ್ಣದ ನೂರಾರು ಗುಲಾಬಿ ಹೂವುಗಳಿಂದ ಸಿಂಗಾರ ಮಾಡಲಾಗಿದೆ. ಇನ್ನು ಅಪ್ಪು ಸಮಾಧಿಗೆ ಭೇಟಿ ನೀಡಿದ ಪತ್ನಿ ಅಶ್ವಿನಿ ಹಾಗೂ ಪುತ್ರಿ ವಂದಿತಾ ಅಪ್ಪು ನೆನೆದು ಕಣ್ಣೀರಾಕಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಸಹ ಸಮಾಧಿಗೆ ಭೇಟಿ ನೀಡಿ ಚಿಕ್ಕಪ್ಪನಿಗೆ ನಮನ ಸಲ್ಲಿಸಿದ್ದಾರೆ . ಇಷ್ಟೇ ಅಲ್ಲದೇ ಡಾ.ರಾಜ್ ಕುಟುಂಬದ ಇತರೆ ಸದಸ್ಯರು ಸಮಾಧಿಗೆ ಪೂಜೆ ಮಾಡಿ ಭಾವುಕರಾಗಿದ್ದಾರೆ.
ಇನ್ನು, ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಸಮಾಧಿ ನೋಡಲು ಅಭಿಮಾನಿಗಳು ಆಗಮಿಸಿದ್ದಾರೆ. ಅನ್ನ ಸಂತರ್ಪಣೆ ,ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ. ಅಪ್ಪು ನೆನೆದು ಫ್ಯಾನ್ಸ್ ಕೂಡ ಭಾವುಕರಾಗಿದ್ದು, ಸಮಾಧಿಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.