ಗುಜರಾತ್ನ ಗಾಂಧಿನಗರದಲ್ಲಿ ಇಂದು (ಜ. 9) ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿದೊಡ್ಡ ಗ್ಲೋಬಲ್ ಟ್ರೇಡ್ ಶೋ ಉದ್ಘಾಟನೆ ಮಾಡಲಿದ್ದಾರೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮಕ್ಕೆ ಒಂದು ದಿನ ಮುನ್ನ ಈ ಟ್ರೇಡ್ ಶೋ ನಡೆಯುತ್ತಿದೆ. ಟೈಮರ್ ಲೆಸ್ಟೆ, ಮೊಜಾಂಬಿಕ್ ದೇಶಗಳ ಅಧ್ಯಕ್ಷರೂ ಒಳಗೊಂಡಂತೆ ಜಾಗತಿಕ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ವೇಳಾಪಟ್ಟಿ ಪ್ರಕಾರ, ದ್ವಿಪಕ್ಷೀಯ ಭೇಟಿಗಳ ಬಳಿಕ ಪ್ರಧಾನಿಗಳು ಜಾಗತಿಕ ಕಾರ್ಪೊರೇಟ್ ಸಂಸ್ಥೆಗಳ ಸಿಇಒಗಳೊಂದಿಗೆ ಸಭೆ ನಡೆಸಲಿದ್ದಾರೆ.
ಇಂದು ಮಂಗಳವಾರ ಸಂಜೆ ಇಲ್ಲಿನ ಏರ್ಪೋರ್ಟ್ನಿಂದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಾಹ್ಯನ್ ಅವರ ಜೊತೆ ನರೇಂದ್ರ ಮೋದಿ ರೋಡ್ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಬುಧವಾರ ಬೆಳಗ್ಗೆ (ಜ. 10) ಅವರು ಗಾಂಧಿನಗರದ ಮಹಾತ್ಮ ಮಂದಿರ್ನ್ಲಲಿ 10ನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ಗ್ಲೋಬಲ್ ಟ್ರೇಡ್ ಶೋನಲ್ಲಿ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ
ಇಂದು ನಡೆಯಲಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ ಎರಡು ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಆಯೋಜಿಸಲಾಗುತ್ತಿದೆ. 13 ಬೃಹತ್ ಸಭಾಂಗಣಗಳು ಸಜ್ಜಾಗಿವೆ. ಭಾರತದಲ್ಲಿ ಇದೂವರೆಗೂ ಇಷ್ಟು ದೊಡ್ಡ ಮಟ್ಟದಲ್ಲಿ ಟ್ರೇಡ್ ಶೋ ನಡೆಯುತ್ತಿರುವುದು ಇದೇ ಮೊದಲು.
ಒಟ್ಟು 100 ವಿಸಿಟಿಂಗ್ ದೇಶಗಳು ಮತ್ತು 33 ಪಾರ್ಟ್ನರ್ ದೇಶಗಳು ಈ ಟ್ರೇಡ್ ಶೋನಲ್ಲಿ ಭಾಗಿಯಾಗುತ್ತಿವೆ. ಆಸ್ಟ್ರೇಲಿಯಾ, ಸೌತ್ ಕೊರಿಯಾ, ಸಿಂಗಾಪುರ್, ಯುಎಇ, ಯುಕೆ, ಜರ್ಮನಿ, ನಾರ್ವೆ ಒಳಗೊಂಡಂತೆ 20 ದೇಶಗಳ ರಿಸರ್ಚ್ ಸೆಕ್ಟರ್ ಅನ್ನು ಪ್ರತಿನಿಧಿಸುವ 1,000ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. ಭಾರತದ 450 ಎಂಎಸ್ಎಂಇ ಘಟಕಗಳು ಕೂಡ ಉಪಸ್ಥಿತಿ ತೋರುತ್ತಿವೆ.