– ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜನೆ
ಪ್ರತಿನಿಧಿ ವರದಿ ಮೈಸೂರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯೋಧರು, ಕಮಾಂಡೋ ಪಡೆ ಹಾಗೂ ಸ್ಥಳೀಯ ಪೊಲೀಸರು ಪಥ ಸಂಚಲನ ನಡೆಸಿದರು.
ಮೈಸೂರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಎಫ್ಟಿಎಸ್ ವೃತ್ತದಿಂದ ಆರಂಭವಾದ ಪೊಲೀಸ್ ಭದ್ರತಾ ಪಡೆಗಳ ಪಥಸಂಚಲನ, ಫೌಂಟೇನ್ ವೃತ್ತ, ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆ, ಮಾರುತಿ ಸರ್ಕಲ್ ಮಾರ್ಗವಾಗಿ ಗಾಂಧಿನಗರ ಪ್ರಮುಖ ರಸ್ತೆಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಿತು.
ಪಥಸಂಚಲನದಲ್ಲಿ ಸಾಗಿದ ಭದ್ರತಾ ಪಡೆಯ ಸಿಬ್ಬಂದಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಮೂಲಕ, ಚುನಾವಣೆ ನಡೆಯುವ ದಿನದಂದು ಜನರು ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಸಂದೇಶ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
==================