ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ “ಮೈಸೂರು ಸಂಗೀತ ಸುಗಂಧ” ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ .ಕೇಂದ್ರ ಪ್ರವಾಸೋಧ್ಯಮ ಇಲಾಖೆ ಹಾಗು ಸಂಸ್ಕೃತಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ ನಡೆದಿದ್ದು,ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್ ಚಾಲನೆ ನೀಡಿದ್ದಾರೆ.
ಈ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಅಪಾರ ಸಂತಸ ತಂದಿದೆ. ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರವಾದುದು. ದೇಶ ಆರ್ಥಿಕವಾಗಿ ಸದೃಢವಾದರೆ ಇಡೀ ದೇಶ ಎಲ್ಲಾ ರಂಗಗಳಲ್ಲೂ ಸದೃಢವಾಗುತ್ತದೆ. ಕರ್ನಾಟಕ ಸಂಗೀತ ಇಡೀ ದೇಶದಾದ್ಯಂತ ಮನೆ ಮಾತಾಗಿದೆ. ಏಕ್ ಭಾರತ್ ಶ್ರೇಷ್ಟ ಭಾರತ್ ಸಾಕಾರಗೊಳ್ಳಲು ಸಂಗೀತ ಪ್ರೇರಣೆಯಾಗಿದೆ.
ವಿಭಿನ್ನವಾದ ಭಾಷೆ ಸಂಸ್ಕೃತಿ ಹೊಂದಿದ್ದರೂ ದೇಶ ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ. ಕನ್ನಡ ಭಾಷೆ ಭಕ್ತಿ ಸಂಗೀತದ ಮೂಲಕ ಮನ ಮುಟ್ಟುತ್ತದೆ. ಹಲವು ವಿಶೇಷತೆಗಳನ್ನು ಹೊಂದಿರುವ ಮೈಸೂರು ದಾಸ ಸಂಗೀತ ಪರಂಪರೆಯನ್ನು ಹೊಂದಿದೆ. ಪುರಂದರದಾಸರು ಕೀರ್ತನೆಗಳ ಮೂಲಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯ.
ಇದರ ಜೊತೆಗೆ ಕನಕದಾಸ, ವಾದಿರಾಜ ದಾಸ ಮೊದಲಾದವರು ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ.ಕರ್ನಾಟಕ ಶಾಸ್ತ್ರೀಯ ಸಂಗೀತದ ಮೂಲ ಮೈಸೂರು ಆಗಿದೆ ಎಂದರು. ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ ಎಂದು ಬಣ್ಣಿಸಿದರು.
ಇದೇ ವೇಳೆಪುರಂದರದಾಸರ ರಾಗಿ ತನ್ನಿರಿ ಭಿಕ್ಷಕೆ ರಾಗಿ ತನ್ನಿರಿ, ಭೋಗ್ಯರಾಗಿ, ಯೋಗ್ಯರಾಗಿ, ಭಾಗ್ಯವಂತರಾಗಿ, ನೀವು ಭಿಕ್ಷಕೆ ರಾಗಿ ತನ್ನಿರಿ ಎಂಬ ಜನಪ್ರಿಯ ಕೀರ್ತನೆಯನ್ನು ನಿರ್ಮಲಾ ಸೀತಾರಾಮನ್ ಹಾಡಿ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸುಮನ್ ಬಿಲ್ಲಾ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.