ಬೆಂಗಳೂರು, ಜನವರಿ 4: ವಿಶ್ವ ಹಿಂದೂ ಪರಿಷತ್ನ ಪ್ರಮುಖರು ಗುರುವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದರು. ಪ್ರತಿಪಕ್ಷಗಳ ನಾಯಕರಿಗೆ ರಾಮ ಮಂದಿರ ಉದ್ಘಾಟನೆಯ ಆಮಂತ್ರಣ ನೀಡಲಾಗುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪಗಳ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ. ರಾಮ ಮಂದಿರ ಉದ್ಘಾಟನೆಯ ‘ಅಕ್ಷತಾ ಅಭಿಯಾನ’ದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹೆಬ್ಬಾಳ್ಕರ್ ಅವರ ಮನೆಗೆ ತೆರಳಿ, ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳ್ಕರ್, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಪರಮೇಶ್ವರ ಹೆಗಡೆ, ಶ್ರೀಕಾಂತ ಕದಂ, ಆನಂದ ಬುಕ್ಕೆಬಾಗ್, ಗುರುದತ್ತ ಕುಲಕರ್ಣಿ ಉಪಸ್ಥಿತರಿದ್ದರು.
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಿರ್ವಹಣೆಯ ಕಾರಣ ಟ್ರಸ್ಟ್ನವರು ಎಲ್ಲರನ್ನೂ ಆಹ್ವಾನಿಸುತ್ತಿಲ್ಲ. ಪರಿಸ್ಥಿತಿ ನೋಡಿಕೊಂಡು ಪ್ರಮುಖರನ್ನಷ್ಟೇ ಆಹ್ವಾನಿಸುತ್ತಿದ್ದಾರೆ. ಇದರಲ್ಲಿ ರಾಜಕೀಯವಿಲ್ಲ. ಕೇಂದ್ರ ಸಚಿವನಾದ ನನ್ನನ್ನೇ ಸಮಾರಂಭಕ್ಕೆ ಬರಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇತ್ತೀಚೆಗೆ ಹೇಳಿದ್ದರು. ಉದ್ಘಾಟನೆ ದಿನ ಮನೆಯಲ್ಲೇ ದೀಪ ಬೆಳಗಿಸಿ ನಂತರದ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಸಹ ಇತ್ತೀಚೆಗೆ ಭಕ್ತರಲ್ಲಿ ಮನವಿ ಮಾಡಿದ್ದಾರೆ.