ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟದ ಪಾಲಾರ್ ನಲ್ಲಿರುವ ಹಾಡಿಗೆ ವಿದ್ಯುತ್ ಸಂಪರ್ಕ ನೀಡದಿದ್ದರೆ ಏ.1ರಂದು ಕೊಳ್ಳೇಗಾಲದಲ್ಲಿರುವ ಡಿಎಫ್ಒ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಪಾಲಾರ್ ಹಾಡಿಯ ನಿವಾಸಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಅರಣ್ಯವಾಸಿ ಸೇವಾ ಟ್ರಸ್ಟ್ನ ಕಾರ್ಯಾಧ್ಯಕ್ಷ ನಾಗೇಂದ್ರ ಮಾತನಾಡಿ, ಸ್ವತಂತ್ರ್ಯ ಬಂದು 75 ವರ್ಷಕಳೆದರೂ ಇಲ್ಲಿಯವರೆಗೆ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಹಾಡಿಯಲ್ಲಿ 80 ಆದಿವಾಸಿ ಕುಟುಂಬಗಳು ವಾಸ ಮಾಡುತ್ತಿವೆ. ಹಾಡಿಗೆ 50 ಮೀ.ದೂರವಿರುವ ವಿದ್ಯುತ್ ಕಂಬದಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರಣ್ಯ ಇಲಾಖೆಯವರು ಅವಕಾಶ ನೀಡುತ್ತಿಲ್ಲ. ಇಲ್ಲ ಸಲ್ಲದ ಕಾನೂನುಗಳನ್ನು ಹೇಳಿ ಆದಿವಾಸಿ ಜನರಿಗೆ ಸುಖಾ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಸುಮಾರು 30 ವರ್ಷಗಳಿಂದ ವಿದ್ಯುತ್ ಗಾಗಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ವಿದ್ಯುತ್ ನಿಂದ ಆಗುವ ಕೆಲಸಗಳಿಗಾಗಿ ಗೋಪಿನಾಥಂ ಗೆ ಬರಬೇಕು. ವಿದ್ಯುತ್ ಸಂಪರ್ಕದ ವಿಚಾರದಲ್ಲಿ ಡಿಎಫ್ಒ ಸಂತೋಷ್ ಕುಮಾರ್ ಅವರು ನಮಗೆ ತೊಂದರೆ ಕೊಡುತ್ತಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.
ಗೋಪಿನಾಥಂನಲ್ಲಿರುವ ಖಾಸಗಿ ರೆಸಾರ್ಟ್ವೊಂದಕ್ಕೆ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಆದರೆ, ನಮಗೆ ಅನುಮತಿ ನೀಡುತ್ತಿಲ್ಲ. ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ನೀಡದಿದ್ದರೆ ನಮಗೆ ಚುನಾವಣೆಯ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿರುವ 148 ಹಾಡಿಗಳಲ್ಲೂ ಚುನಾವಣೆ ಬಹಿಷ್ಕಾರ ಮಾಡಲು ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಮಹದೇವ, ಮಧು, ಗಿರೀಶ್, ಮುರುಗೇಶ್ ಇದ್ದರು